Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Showing posts with label Sri Gokarna Temple. Show all posts
Showing posts with label Sri Gokarna Temple. Show all posts
ಶ್ರೀ ಮಹಾಬಲೇಶ್ವರ ದೇವಸ್ಥಾನ, ಗೋಕರ್ಣ, ಉ.ಕ.
Shree Mahabaleshwara Temple, Gokarna, U.K.

Athmalinga, Gokarna
ಮಹಾಬಲೇಶ್ವರ ದೇವಆತ್ಮಲಿಂಗ
ಶ್ರೀ ಕ್ಷೇತ್ರ ಗೋಕರ್ಣವು(Gokarna) ಮಹಾನ್ ಮುಕ್ತಿ ಕ್ಷೇತ್ರಗಳಲ್ಲಿ ಒಂದು. ಅಲ್ಲದೇ ಪರಶುರಾನ ಸೃಷ್ಠಿಯ ಸಪ್ತ ಕ್ಷೇತ್ರಗಳಲ್ಲಿ ಒಂದಾಗಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪರಮಪವಿತ್ರವಾದ ಮುಕ್ತಿ ಸ್ಥಳವೆಂದೆ ಖ್ಯಾತಿಯನ್ನು ಹೊಂದಿದೆ. ಇಲ್ಲಿ ಪರಮೇಶನು 'ಮಹಾಬಲೇಶ್ವರ' ಎಂಬ ನಾಮದಿಂದ ನೆಲೆಸಿ ಮಹಾಮುಕ್ತಿದಾಯಕನಾಗಿದ್ದಾನೆ. ಇಲ್ಲಿ ದಿನ ನಿತ್ಯ ಸಾವಿರಾರು ಜನರು ಬಂದು ಶ್ರಾಧ್ಧ ಕರ್ಮಾದಿಗಳನ್ನು ನೆರೆವೆರೆಸಿ ತೆರಳುತ್ತಾರೆ. ಈ ಮೂಲಕ ತಮ್ಮ ಪಿತೃಗಳಿಗೆ ಅಥವಾ ಗತಿಸಿದ ಅತೃಪ್ತ ಜೀವಗಳಿಗೆ ಮೋಕ್ಷವನ್ನು ಕರುಣಿಸುವ ದೇವನಲ್ಲಿ ಮೊರೆಯಿಟ್ಟು ಆ ಮಹಾದೇವನಲ್ಲಿ ಲೀನಗೊಳಿಸುತ್ತಾರೆ.
ಶ್ರೀ ಮುಕ್ತಿ ಗಣಪತಿ, ಗೋಕರ್ಣ
Sri Mahaganapathi, Gokarna
ಹೀಗೆ ಮುಕ್ತಿಸ್ಥಳವೆಂದೆ ಪ್ರಖ್ಯಾತಿಯನ್ನು ಪಡೆದು, ಕಾಶಿಯೆಂದೆ ಬಿಂಬಿಸಲ್ಪಡುವ ಈ ದೇವಾಯಲದಲ್ಲಿ ಪರಮೇಶ್ವರ ಬಂದು ನೆಲೆಸಿದ ಸಂಗತಿಗೆ ಪುರಾಣದಲ್ಲಿ ಮಾಹಿತಿ ದೊರಕುತ್ತದೆ. ಹೀಗೆ ಮಹಾದೇವನ ಬಗೆಗಿನ ಒಂದು ಇಂತಿದೆ........
ಐತಿಹ್ಯ : ಅನಾದಿಕಾಲದಲ್ಲಿ ರಾವಣನು ಪರಮೇಶ್ವರನ ಪರಮ ಭಕ್ತನಾಗಿದ್ದ. ರಾವಣನಲ್ಲದೆ ಆತನ ತಾಯಿಯೂ ಕೂಡಾ ಪರಮೇಶ್ವರನ ಮಹಾನ್ ಭಕ್ತೆಯಾಗಿದ್ದಳು. ಹೀಗೆ ದಿನಕಳೆಯುತ್ತಾ ರಾವಣನ ತಾಯಿ ಒಂದು ಆಸೆಯನ್ನು ತೋಡಿಕೊಳ್ಳುತ್ತಾಳೆ. ತನ್ನ ಮಗನಲ್ಲಿ ನನಗೆ ಪರಮೇಶ್ವರನ ಪೂಜೆ ಮಾಡಲು, ಸದಾ ಪರಮೇಶ್ವರನನ್ನು ಸೇವಿಸಲು ಸಾಕ್ಷಾತ್ ದೇವನ ಆತ್ಮಲಿಂಗವನ್ನು ತಂದುಕೊಡುವಂತೆ ಹೇಳುತ್ತಾಳೆ. ಆಗ ರಾವಣನು ತಾಯಿಯ ಭಯಕೆಯನ್ನು ಈಡೇರಿಸಲು ಕೈಲಾಸಕ್ಕೆ ನಡೆಯುತ್ತಾನೆ.
ಹೀಗೆ ಕೈಲಾಸಕ್ಕೆ ಮುಂದುವರೆದು ಸಾಗುವ ರಾವಣನ ಆರ್ಭಟವನ್ನು ಕಂಡು ದೇವಾನು ದೇವತೆಗಳು ಭಯ-ಭೀತರಾಗುತ್ತಾರೆ. ಹೀಗೆ ಭಯಗೊಂಡ ದೇವತೆಗಳು ಸಮಾಲೋಚಿಸಿ ನಾರದರ ಮೂಲಕ ಒಂದು ಉಪಾಯವನ್ನು ಹೂಡುತ್ತಾರೆ. ಅಂತೆಯೇ ನಾರದರು ರಾವಣನು ಬರುತ್ತಿರುವ ಮಾರ್ಗ ಮಧ್ಯದಲ್ಲಿ ರಾವಣನನ್ನು ತಡೆದು ಒಂದು ಉಪಾಯವನ್ನು ಹೂಡುತ್ತಾರೆ. ರಾವನಲ್ಲಿ ನೀನು ದೂರ ಹೊರಟಿರುವೇ? ಎಂದು ಕೇಳುತ್ತಾರೆ. ಆಗ ನಾನು ಶಿವನ ಆತ್ಮಲಿಂಗ ತರಲು ಕೈಲಾಸಕ್ಕೆ ಹೊರಟಿರುವೆ ಎಂದು ಹೇಳುತ್ತಾನೆ. ಅದನ್ನು ಕೇಳಿದ ನಾರದರು ನಗಲು ಆರಂಭಿಸುತ್ತಾರೆ. ಆಗ ರಾವಣನು ಏಕೆ ನಗುತ್ತೀರಿ ಎಂದು ನಾರದರಿಗೆ ಪುನಃ ಪ್ರಶ್ನೆ ಮಾಡಲು ನಾರದರು ರಾವಣ ನೀನು ಮೂರ್ಖನಾಗಿದ್ದಿ, ಪರಶಿವನು ತನ್ನ ಸತಿಯನ್ನು ಬಿಟ್ಟು ಬಂದಾನೇ, ಆತನು ಪಾರ್ವತಿಯೊಡನೆ ಕೈಲಾಸದಲ್ಲಿ ಇರುವಾಗ ನೀನು ಹೇಗೆ ತಾನೇ ಆತ್ಮಲಿಂಗವನ್ನು ತರಲು ಸಾಧ್ಯ ಎಂದು. ಆಗ ರಾವಣ ಅದಕ್ಕೆನು ಉಪಾಯ ಎಂದು ಕೇಳಲು ಪರಮೇಶ್ವರನ ರಾಣಿ ಪರಮೇಶ್ವರೀಯನ್ನೆ ನೀನು ನಿನ್ನೊಂದಿಗೆ ಕರೆದುಕೊಂಡು ಹೋಗು ಎಂದು. ಅವಳನ್ನು ನೀನು ಪಡೆದೆ ಎಂದಾದರೆ ಜಗತ್ತೆ ನಿನ್ನ ಪರವಾಗುತ್ತದೆ ಎಂದು ಹೇಳುತ್ತಾರೆ.
Kotitheertha Sarovar, ಕೋಟಿತೀರ್ಥ ಸರೋವರ

ಆಗ ರಾವಣನು ಅಹುದು ಅಲ್ಲವೇ? ಆದರೆ ಪರಮೇಶ್ವರನು ತನ್ನ ಸತಿಯನ್ನು ಕೊಡುವನೇ ಎಂದು ಮರುಪ್ರಶ್ನಿಸಿದಾಗ, ನಾರದನು ರಾವಣ ಶಿವನು ಭಕ್ತಪ್ರಿಯ. ಅವನು ಬೇಡಿದ್ದನ್ನು ಕೋಡುವನು ಎಂದು ಹೇಳುತ್ತಾನೆ. ಅದೇ ರೀತಿ ಪಾರ್ವತಿಯು ಪರಮಸುಂದರಿ ಎಂದು ವರ್ಣಿಸುತ್ತಾರೆ. ಅದರಂತೆ ರಾವಣನು ಕೈಲಾಸಕ್ಕೆ ತೆರಳಿ ಅಲ್ಲಿ ಪರಶಿವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ತಂದೆಯೇ ನನಗೊಂದು ವರವನ್ನು ಕೊಡಬೇಕು ಎಂದು ಹೇಳುತ್ತಾನೆ. ಅದರಂತೆ ಪರಮೇಶ್ವರನು ಆಯಿತು ಏನು ಬೇಕು ಕೇಳು ಎಂದಾಗ ಪರಮೇಶ್ವರ ನಿನ್ನ ಪಟ್ಟದ ಅರಸಿಯಾದ ಮಹಾದೇವಿಯನ್ನು ನನ್ನೊಂದಿಗೆ ಕಳಿಸಬೇಕು ಎಂದು ಕೇಳುತ್ತಾನೆ. ಆಗ ಪರಮೇಶ್ವರನು ತಥಾಸ್ತು ಎಂದನು, ಆದರೆ ನೀನು ಪಾರ್ವತಿಯನ್ನು ಕರೆದುಕೊಂಡು ಹೋಗುವಾಗ ತಿರುಗಿ ನೋಡಬಾರದು ಎಂದು ಹೇಳುತ್ತಾನೆ. ಅದಕ್ಕೆ ಆಯಿತು ಎಂದು ಹೇಳುತ್ತಾನೆ.
ಹೀಗೆ ಪಾರ್ವತಿಯನ್ನು ಕರೆದಿಕೊಂಡು ರಾವಣನು ಮುಂದೆ ಸಾಗುತ್ತಾ ನಡೆಯಲು ಆದಿಶಕ್ತಿಯಾದ ಮಹಾದೇವಿಯು ರಾವಣನನ್ನು ಹಿಂಬಾಲಿಸಲು ದಟ್ಟ ಕಾನನದ ಬಳಿಸಾಗಿದಾಗ ಅಲ್ಲಿ ನಾರದರು ಪ್ರತ್ಯಕ್ಷರಾಗಿ ರಾವಣ....!! ನೀನು ನಿಜವಾಗಿ ಮೂರ್ಖನೆ ಸರಿ. ನಿನ್ನೊಂದಿಗೆ ಶಿವನು ಪಾರ್ವತಿಯನ್ನು ಕಳಿಸಿದ್ದಾನೆಂದು ನೀನು ತಿಳಿದಿದ್ದಿಯೇ? ಆದರೆ ಪರಮೇಶ್ವರನು ನಿನಗೆ ಮೋಸವೆಸಗಿದ್ದಾನೆ. ಅವನು ನಿನ್ನೊಂದಿಗೆ ಉಗ್ರರೂಪಿಣಿಯಾದ ಕಾಳಿಕೆಯನ್ನು ಕಳಿಸಿರುವುದು ಎಂದು ಹೇಳಿ, ಬೇಕಾದರೆ ನೀನೆ ತಿರುಗಿ ನೋಡು ಎಂದು ಹೇಳುತ್ತಾನೆ. ಆಗ ರಾವಣನು ಕೋಪಗೊಂಡು ತಿರುಗಿ ನೋಡುವಾಗ ಆದಿಶಕ್ತಿಯಾದ ಮಹಾದೇವಿಯು ಭದ್ರಕಾಳಿ ರೂಪವನ್ನು ತಾಳಿರುತ್ತಾಳೆ. ಆಗ ಭಯಭಿತನಾದ ರಾವಣ ತನ್ನ ಅಂದಕಾರದ ಪೊರೆಯನ್ನು ಕಳಚಿ ತಾಯೇ ನನ್ನಿಂದ ತಪ್ಪಾಯ್ತು. ಸರ್ವರಿಗೂ ತಾಯಿಯಾದ ನಿನ್ನನ್ನೆ ನಾನು ಮೋಹಿಸಿದೆ. ಅಮ್ಮಾ ಶಾಂತಳಾಗು ಎಂದು ಗೋಗೆರೆಯುತ್ತಾನೆ. ಆಗ ಮಾತೆಯು ನಾನು ಈ ಕ್ಷೇತ್ರದಲ್ಲಿ ಭದ್ರಕಾಳಿಯಾಗಿ ನೆಲೆಸುತ್ತೇನೆ, ಮುಂದೆ ಈ ಕ್ಷೇತ್ರವು ಪ್ರಸಿದ್ದಿಯನ್ನು ಪಡೆದಾಗ ನಾನು ಇದೇ ಸ್ಥಳದಲ್ಲಿ ನೆಲೆಸುತ್ತೇನೆ ಎಂದು ಅಭಯವನ್ನಿಟ್ಟು ಮಾತೆಯು ಅದೃಶ್ಯಳಾಗುತ್ತಾಳೆ.
ಶ್ರೀ ಗೋಕರ್ಣ ಮಹಾಬಲೇಶ್ವರ ದೇವಸ್ತಾನ
Sri Mahabaleshwara Temple

ಹೀಗೆ ರಾವಣನು ತಾನು ಬಂದ ಕಾರ್ಯವನ್ನು ಮರೆತು ಬೆರಾವುದೋ ಕಾರ್ಯವನ್ನು ಎಸಗಿ ಪುನಃ ಪರಶಿವನನ್ನು ಕುರಿತು ಅಖಂಡ ತಪಸ್ಸನ್ನು ಮಾಡುತ್ತಾನೆ. ರಾವಣನ ತಪಸ್ಸಿಗೆ ಒಲಿದು ಪರಮೇಶ್ವರ ಏನು ವರ ಬೇಕು ಎಂದು ಕೇಳುತ್ತಾನೆ. ಆಗ ರಾವಣನು ದೇವಾ ನನಗೆ ನಿನ್ನ ಆತ್ಮಲಿಂಗ ಬೇಕು ಎಂಬುದಾಗಿ ಕೇಳುತ್ತಾನೆ. ಅದಕ್ಕೆ ಪರಮೇಶ್ವರ ಭಕ್ತ ನಿನ್ನ ಭಕ್ತಿಗೆ ಮೆಚ್ಚಿ ರಾವಣನಾದ ನಿನಗೆ ರಾವಣೇಶ್ವರ ಎಂಬು ಬಿರುದನ್ನು ನೀಡುತ್ತಿದ್ದೇನೆ. ಅಂತೆ ನನ್ನ ಈ ಆತ್ಮಲಿಂಗವನ್ನು ನೀನು ಭೂಮಿಗೆ ಸ್ಪರ್ಶಿಸಿದರೆ ಅದು ಅಲ್ಲಿ ನೆಲೆಯಾಗುತ್ತದೆ ಎಂದು ಹೇಳಿ ಅದೃಶ್ಯನಾಗುತ್ತಾನೆ.
ಇತ್ತ ಆತ್ಮಲಿಂಗವನ್ನು ಪಡೆದು ಭೀಕರ ನಗುವಿನಿಂದ ಆರ್ಭಟಮಾಡುತ್ತಾ ರಾವಣ ನಗಲು ದೇವಾನು ದೇವತೆಗಳು ಭಯಗೊಳ್ಳುತ್ತಾರೆ. ಆಗ ಪುನಃ ದೇವತೆಗಳೆಲ್ಲ ಒಂದಾಗಿ ಪುನಃ ಒಂದು ಉಪಾಯವನ್ನು ಹೂಡಿ ಗಣಪತಿಯನ್ನು ಬ್ರಾಹ್ಮಣ ವಟುವಿನ ವೇಷವನ್ನು ಧರಿಸಿ ಭೂಮಿಗೆ ಕಳಿಸುತ್ತಾರೆ. ಹೀಗೆ ಸಂಜೆಯಾಗುತ್ತಾ ರಾವಣೇಶ್ವರನು ಸಮುದ್ರ ತಟದಲ್ಲಿ ನಡೆದು ಸಾಗುವಾಗ ಸಂದ್ಯಾವಂದನೆ ಮಾಡುವ ಸಮಯ ಆಗುತ್ತದೆ. ಆಗ ಅತ್ತಿತ್ತ ಕಣ್ಣು ಹಾಯಿಸಿದಾಗ ಅಲ್ಲಿ ವಟು ವೇಷದಾರಿ ಗಣಪತಿ ಕಾಣುತ್ತಾನೆ. ಅದನ್ನು ಕಂಡ ರಾವಣ ಏ ಬಾಲಕ ಇಲ್ಲಿ ಬಾ ಎಂದು ಕರೆಯುತ್ತಾನೆ. ಆಗ ವಟು ವೇಷಧಾರಿ ಗಣಪತಿಯು ಹತ್ತಿರ ಬಂದು ಏನು ಕರೆದ ಕಾರಣ ಎಂದು ಕೇಳಲು, ರಾವಣೇಶ್ವರನು ಬಾಲಕ ಈ ಆತ್ಮಲಿಂಗವನ್ನು ಸ್ವಲ್ಪ ಹಿಡಿದುಕೊಳ್ಳಬಹುದೆ? ಎಂದು ಕೇಳುತ್ತಾನೆ. ಆಗ ಬಾಲಕ ಆಗಬಹುದು, ಆದರೆ ನಾನು ಮೂರು ಬಾರಿ ಕೂಗುವುದರೊಳಗೆ ನೀನು ಮೇಲೆ ಬರಬೇಕು. ಇಲ್ಲವಾದರೆ ನಾನು ಇದನ್ನು ಇಲ್ಲೇ ಇಡುತ್ತೇನೆ ಎಂದು ಹೇಳುತ್ತಾನೆ.
ಅದಕ್ಕೆ ಆಗಬಹುದು, ನಾನು ಬೇಗನೆ ಬರುತ್ತೇನೆ ಎಂದು ಸಮುದ್ರಕ್ಕೆ ತೆರಳಿದ ರಾವಣೇಶ್ವರ ಹೋಗುತ್ತಲೇ ಬಾಲಕ ಒಮ್ಮೆ ಕೂಗುತ್ತಾನೆ. ಆಗ ರಾವಣ ಬಂದೇ ಎಂದು ಹೇಳುತ್ತಾನೆ. ಮತ್ತೇ ಪುನಃ ಕೂಗುತ್ತಾನೆ, ಹಾಗೇ ಮೂರನೇ ಬಾರಿ ಕೂಗಿ ರಾವಣ ಬರದೇ ಇರುವುದನ್ನು ಕಂಡು ಆತ್ಮ ಲಿಂಗವನ್ನು ಅಲ್ಲಿಯೇ ನೆಲದ ಮೇಲೆ ಇಡುತ್ತಾನೆ. ಆಗ ರಾವಣ ಕೋಪದಿಂದ ಮೇಲೋಡಿ ಬಂದ ಬಾಲಕನ ಶಿರದ ಮೇಲೆ ಒಂದು ಗುದ್ದನ್ನು ನೀಡುತ್ತಾನೆ. ಇಂದಿಗೂ ಗೋಕರ್ಣ ಕ್ಷೇತ್ರದ ಮಹಾಗಣಪತಿಯ ಶಿರದ ಮೇಲೆ ಒಂದು ಚಿಕ್ಕ ರಂದ್ರದಂತಿರುವುದನ್ನು ಕಾಣಬಹುದು. ಹೀಗೆ ರಾವಣನು ನೆಲಕ್ಕೆ ಸ್ಪರ್ಶವಾದ ಆತ್ಮಲಿಂಗವನ್ನು ಅಲ್ಲಿಂದ ಕೀಳಲು ಪ್ರಯತ್ನಿಸುತ್ತಾನೆ. ಆದರೆ ಅದು ಮತ್ತೂ ದೊಡ್ಡದಾಗಿ ಬೆಳೆಯಲಾರಂಬಿಸುತ್ತದೆ.
ಹೀಗೆ ಈ ರೀತಿಯಾಗಿ ಭದ್ರಕಾಳಿ(ತಾಮ್ರ ಗೌರಿ) ಮೊದಲೆ ಇಲ್ಲಿ ನೆಲೆಸಿ, ಮುಂದೆ ಪರಶಿವನು ಇಲ್ಲಿ ಮಹಾಬಲೇಶ್ವರ ಎಂಬ ನಾಮದಿಂದ ಪ್ರಸಿದ್ದಿಯನ್ನು ಪಡೆಯುತ್ತಾನೆ. ಹೀಗೆ ಪರಶಿವನು ನೆಲೆಸಿ ನಿಂತ ಈ ಪರಮ ಪುಣ್ಯ ಸ್ಥಳವು ಮುಂದೆ ಗೋಕರ್ಣ ಎಂದು ಪ್ರಸಿದ್ದಿಯನ್ನು ಪಡೆಯುತ್ತದೆ. ಆತ್ಮಲಿಂಗವು ಗೋವಿನ ಕಿವಿಯನ್ನು ಹೋಲುವುದರಿಂದ ಈ ಕ್ಷೇತ್ರವು ಗೊಕರ್ಣ ಎಂದು ಪ್ರಸಿದ್ದಿಯನ್ನು ಪಡೆಯುತ್ತದೆ.
ಗೋಕರ್ಣದಲ್ಲಿ ಅನೇಕ ದೇವ ದೇವತೆಗಳ ಗುಡಿಗಳಿವೆ. ಇಲ್ಲಿಯ ವಿಶೇಷ ಆಕರ್ಷಣೆ, ಗೋಕರ್ಣದ ಮಹಾಬಲೇಶ್ವರ  ದೇವಾಲಯದ ಸಭಾಮಂಟಪದಲ್ಲಿರುವುದು ಪಾರ್ವತಿ, ನಂದಿ ಮತ್ತು ಗಣಪತಿಯ ಮೂರ್ತಿಗಳು.  ಇಲ್ಲಿ ಭೂತನಾಥ ಸತಿಯಾದ ಆದಿಶಕ್ತಿ ಭದ್ರಕಾಳಿ ರೂಪದಲ್ಲಿ ಭೀಭತ್ಸಳಾಗಿದ್ದಾಳೆ. ಗಣಪತಿ ದೇವರ ಗರ್ಭಗುಡಿಯ ಮೇಲೆ ಅಷ್ಟದಿಕ್ಪಾಲಕರು, ನಾಗ ಮತ್ತು ದಶಾವತಾರ ಪಡೆದು ಸ್ಥಾಪಿಸಿದ ಆತ್ಮಲಿಂಗ ಸಾಲಿಗ್ರಾಮ ಪೀಠದ ಮಧ್ಯದಲ್ಲಿದೆ. ನಮಗೆ ತೋರುವುದು ಅಂಗುಷ್ಟಗಾತ್ರದ ಲಿಂಗ ಮಾತ್ರ. ಮಹಾಬಲೇಶ್ವರ ದೇವಾಲಯದಲ್ಲಿ ಸುಂದರ ಶಿಲ್ಪಗಳೂ ಇವೆ.
ಊರೊಳಗಿನ ಕೋಟಿತೀರ್ಥ ಒಂದು ದೊಡ್ಡ ಕೆರೆ. ಕೆರೆಯ ಮಧ್ಯದಲ್ಲಿರುವುದು ಸಪ್ತಕೋಟೀಶ್ವರ ಲಿಂಗ. ಹಿಂದೆ ಅದರ ಎದುರು ಎರಡು ಸಂದಿಗಳಿದ್ದವು. ಕೆರೆಯ ಸುತ್ತಲೂ ದೇವದೇವತೆಗಳ ಗುಡಿಗಳಿವೆ. ದಕ್ಷಿಣಕ್ಕೆ ಕಾಲಭೈರವ, ಪೂರ್ವದಲ್ಲಿ ಶಂಕರ ನಾರಾಯಣ ದೇವಾಲಯಗಳಿವೆ. ಆಗ್ನೇಯದಲ್ಲಿ ಪಟ್ಟದ ವಿನಾಯಕ ಇದ್ದಾನೆ. ದಕ್ಷಿಣ ಮತ್ತು ಉತ್ತರದಲ್ಲಿ ಸ್ವರ್ಣವಳ್ಳಿ ಮತ್ತು ರಾಮಚಂದ್ರಾಪುರ ಮಠಗಳಿವೆ. ಗೋಕರ್ಣ ಗ್ರಾಮದ ಅಧಿದೇವತೆ ಭದ್ರಕಾಳಿ ಗೋಕರ್ಣ ಪ್ರವೇಶಿಸುವಾಗಲೇ ಈ ಗುಡಿ ಕಾಣಿಸುವುದು. ಈ ದೇವಿಗೆ ದಸರೆಯಲ್ಲಿ ವಿಶೇಷ ಉತ್ಸವ. ಇಲ್ಲಿ ನಡೆಯುವ ಅಮ್ಮ ನವರ ಕಲಶ, ಬಂಡಿ ಹಬ್ಬ ವಿಶೇಷವಾದದ್ದು.

“ಮಹಾಬಲೇಶ್ವರ ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ”
ವಿಳಾಸ :-
ಶ್ರೀ ಮಹಾಬಲೇಶ್ವರ ದೇವಸ್ಥಾನ,
ಗೋಕರ್ಣ, ಉತ್ತರ ಕನ್ನಡ – ಜಿಲ್ಲೆ.

ಹೆಚ್ಚಿನ ಮಾಹಿತಿಗಾಗಿ ದೇವಾಲಯದ ಅಂತರ್ಜಾಲ http://www.srigokarna.org ಕ್ಕೆ ಭೇಟಿ ನೋಡಿ.