Drop Down Menus CSS Drop Down Menu #
>> Namaskaram..!! Welcome to Namma-Naadu.blogspot.com >> ಓದುಗ ಬಂದುಗಳಿಗೆ ಹೃದಯಪೂರ್ವಕ ನಮಸ್ಕಾರ!! ನಮ್ಮ-ನಾಡು ಅಂತರ್ಜಾಲ ಪುಟ ವೀಕ್ಷಕರು ನಮ್ಮನ್ನು ಇಲ್ಲಿಯವರೆಗೆ ಪ್ರೋತ್ಸಾಹಿಸಿ, ಅಭಿನಂದಿಸಿದ್ದೀರಿ. ಮುಂದೆಯೂ ಕೂಡಾ ಇದೇ ರೀತಿಯಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದು, ನಮ್ಮ-ನಾಡಿನ ಸೊಗಡನ್ನು ಸಾರೋಣ... ಧನ್ಯವಾದಗಳೊಂದಿಗೆ : ರಾಘವ್ ಕೋಟೇಶ್ವರ. >> ನಮ್ಮ ಮುಂದಿನ ಲೇಕನಗಳು : • ಶ್ರೀ ಚಿಕ್ಕಮ್ಮ ದೇವಸ್ಥಾನ, ಚಿಕನ್ಸಾಲ್,ಕುಂದಾಪುರ • ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನ,ಮಠದಬೆಟ್ಟು. ಕೋಟೇಶ್ವರ. >> ಇನ್ನೂ ಹಲವಾರು ದೇವಾಲಯ, ದೈವಾಲಯಗಳ ಮಾಹಿತಿಗಾಗಿ ನಿರೀಕ್ಷಿಸಿ..' >> ಪ್ರಕಟವಾದ ಹೊಸ ಲೇಖನಗಳು : •   ಶ್ರೀ ಅಬ್ಬಗ-ದಾರಗ ದೇವಸ್ಥಾನ, ಮಣಿಕಲ್ಲು   •   ಶ್ರೀ ಕನ್ನಿಕಾ ದುರ್ಗಾ, ಜಪ್ತಿ  • ಶ್ರೀ ಮಾರಿಯಮ್ಮ, ಕಾಪು.....

Sri Aadhiparashakthi Swarnadurgaparameshwari Temple

ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ದೇವಸ್ಥಾನ, ಕುದುರೆಕೆರೆಬೆಟ್ಟು, ಕೋಟೇಶ್ವರ|
Shree Adhiparashakthi Swarnadurga temple, Kudurekerebettu, Koteshwara.


Sri Adhiparashakthi Swarnadurgaparameshwari

ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ಅಮ್ಮನವರು ಮೂರು ಶಕ್ತಿಗಳ ಸಮ್ಮಿಲನ ರೂಪ. ದೇವಿ ಭಾಗವತದಲ್ಲಿ ಉಲ್ಲೇಖಿಸಿರುವಂತೆ ಶ್ರೀ ಆದಿಪರಾಶಕ್ತಿಯು ಪಾರ್ವತಿಯಾಗಿ ಅವತಾರವೆತ್ತಿ ದುಷ್ಟಸಂಹಾರಿಣಿ ದುರ್ಗೆಯಾಗಿ ಭುವಿಯಲ್ಲಿನ ದುರುಳ ದಾನವರನ್ನು ನಾಶಮಾಡುತ್ತಾಳೆ. ಇವಳೇ ದುರ್ಗೆ, ಲಕ್ಷ್ಮೀ, ಸರಸ್ವತೀ. ಇವಳೇ ರುದ್ರ-ವಿಷ್ಣು-ಬ್ರಹ್ಮ. ಸಕಲರಿಗೂ ಮಾತೆಯೂ, ಆದ್ಯಂತ ರಹಿತೆಯೂ ಆದ ಭಗವತಿ ಆದಿಮಾಯೆ ದುರ್ಗೆ.
ಆದಿಪರಾಶಕ್ತಿ ಪೂರ್ಣ ರೂಪದಲ್ಲಿ ಶಿವನ ರಾಣಿ ಪಾರ್ವತಿಯಾಗಿ ಅವತಾರವೆತ್ತುತ್ತಾಳೆ. ಇವಳು ಸತೀಯಾಗಿಯೂ, ದುರ್ಗೆಯಾಗಿಯೂ, ಮಹಿಷಮರ್ದಿನಿಯಾಗಿಯೂ, ಮೂಕಾಂಬಿಕೆಯಾಗಿಯೂ, ಮಿನಾಕ್ಷಿ-ಕಾಮಾಕ್ಷಿ-ಚಾಮುಂಡಿ-ಭದ್ರಕಾಳಿ ಹೀಗೆ ಹಲವಾರು ರೂಪದಲ್ಲಿ ಶಿವನೊಡನೆ ‘ಶಿವಶಕ್ತಿ’ ಯಾಗಿ ತನ್ನ ಮಾಯೆಯನ್ನು ತೋರುತ್ತಾಳೆ. ಇವಳೇ ಮಾತೃಸ್ವರೂಪಿಯಾಗಿ ಸ್ಕಂದ, ಗಣೇಶ, ವೀರೇಶ ಹಾಗೂ ಸಕಲ ದೇವಗಣಗಳಿಗೂ ಮಾತೆಯಾಗಿ ಮಾತೃದೇವತೆಯೆನಿಸಿಕೊಳ್ಳುತ್ತಾಳೆ. ಇವಳು ಮನಸ್ಸಿನ ದೇವತೆಯಾಗಿಯೂ, ಶಕ್ತಿದೇವಿಯಾಗಿಯೂ ಭಕ್ತರನ್ನು ಪೊರೆಯುತ್ತಾಳೆ.
ಶಿವೆಯಾದ ದುರ್ಗೆ ಹರಿಯ ಸೋದರಿಯಾಗಿ ವಿಷ್ಣುಮಾಯೆಯೆನಿಸುತ್ತಾಳೆ. ಈ ಕಾರಣದಿಂದ ಶಿವನ ಮಡದಿಯನ್ನು ರಂಗನಾಥ ಸೋದರಿ ಎಂದು ಕರೆಯಲಾಗುತ್ತದೆ. ಐಹಿಕವಾಗಿ ಸೋದರಿಯಾಗಿಯೂ, ಮೂಲತಃ ಆದಿಮಾಯೆಯ ‘ರಾಜಸ’ ರೂಪವಾದ ಇವಳೆ ವಿಷ್ಣುವಿನೊಂದಿಗೆ ‘ಮಹಾಲಕ್ಷ್ಮೀ’ಯಾಗಿ ‘ಶ್ರೀ’ ಯಾಗಿ, ಪದ್ಮಾವತಿಯಾಗಿಯೂ, ಸೀತಾ-ಸತ್ಯಭಾಮೆ, ರಾಧಾ, ಭೂದೇವಿಯಾಗಿಯೂ ಮೆರೆಯುತ್ತಾಳೆ. ಇವಳು ಸಂಪತ್ತಿನ ಒಡತಿಯಾಗಿ ಸರ್ವಸಂಪದವನ್ನು ಅನುಗ್ರಹಿಸುತ್ತಾಳೆ.
ಹೀಗೆ ಮಾಹಾಮಾಯೇಯು ವಿವಿಧ ಮಾಯೆಯಿಂದ ಹರಿ-ಹರರಲ್ಲಿ ಬೆರತಂತೆ ಬ್ರಹ್ಮನಲ್ಲಿ ವಾಣಿಯಾಗಿ, ಶಾರದೆ, ಸರಸ್ವತೀ, ವಾಗ್ದೇವಿ ಎಂಬ ಹಲವಾರು ನಾಮದಿಂದ ಕರೆಸಿಕೊಳ್ಳುತ್ತಾಳೆ. ಇವಳು ವಿದ್ಯಾಧಿದೇವತೆಯಾಗಿ ಜ್ಞಾನಾಧಿಗಳನ್ನು ದಯಪಾಲಿಸುತ್ತಾಳೆ. ಈ ಮೂಲಕ ಮಹಾದೇವಿ ಆದಿಮಾಯೆಯ ಲೀಲೆ ಅಪಾರವಾದುದು. ಇವಳ ಮಹಿಮೆಯನ್ನು ಬಣ್ಣಿಸಲು ಅಸಾಧ್ಯವಾದುದು. ಹೀಗೆ ದೇವಿ ಮೂರು ರೂಪದಲ್ಲಿ “ಜ್ಞಾನ - ಶಕ್ತಿ - ಅರ್ಥ” ವನ್ನು ದಯಪಾಲಿಸುವ ದೇವಿಯಾಗಿದ್ದಾಳೆ.

ಕ್ಷೇತ್ರ ಮಹಿಮೆ :-
ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ (Swarnadurga)ಅಮ್ಮನವರ ಸಾನ್ನಿಧ್ಯವು ಶಿವನ ಹೃದಯವಾಸಿನಿ ಸಿರಿಗೌರಿ ಪಾರ್ವತಿಯ ಕಲಿಯುಗದ ಮಾನಸ ಕ್ಷೇತ್ರವಾಗಿದೆ. ಮಹಾದೇವನರಸಿ ತನ್ನ ಮಾಯೆಯಿಂದ ಕೋಟ್ಯಾನುಕೋಟಿ ರೂಪವನ್ನು ಧರಿಸಿ, ಕೋಟ್ಯಾನುಕೋಟಿ ನಾಮದಿಂದ ನೆಲೆಸಿ ಈ ಭುವಿಯನ್ನು ಪರಮಪಾವನಗೊಳಿಸಿದ ಮಾಹಾಮಮಾತೆ.
ಹೀಗೆ ಅಸಂಖ್ಯ ನಾಮದಿಂದ ಕರೆಸಿಕೊಳ್ಳುವ ಮಹಾದೇವಿಯಾದ ಪಾರ್ವತಿಯು ಹಯವೆಶಾಂತಪುರದಲ್ಲಿ(ಕುದುರೆಕೆರೆಬೆಟ್ಟು) ನೆಲೆಸಲು ಪ್ರಾಮುಖ್ಯವಾದಂತಹ ಮೂರು ಹಿನ್ನಲೆಯಲೆಯು ಸಾಕ್ಷಿಭೂತವಾಗುತ್ತದೆ.
ಆದಿಮಾಯೆಯಾದ ಪಾರ್ವತಿಯು ಭಕ್ರವತ್ಸಲೆ, ಕರುಣಾಮಯಿ, ಮಾತೃಹೃದಯಿ ಎಂಬುದು ಭಕ್ತರಿಗೆ
ತಿಳಿದಿರುವಂಥ ವಿಚಾರವೇ ಸರಿ. ಇಂದು ಅಮ್ಮನವರ ಮಂದಿರ ನಿರ್ಮಾಣವಾದ ಸ್ಥಳದ ವ್ಯಾಪ್ತಿಗೆ ಸಂಬಂದಿಸಿದಂತೆ ಅನಾದಿಯಲ್ಲಿ ಘಟಿಸಿದ ಒಂದು ಸನ್ನಿವೇಶವು ದೇವಿಯ ಮೂಲಚೈತ್ಯನ್ಯಕ್ಕೆ ಬುನಾದಿಯಾಗುತ್ತದೆ. ಈ ತೆರನಾಗಿ ಅನಾದಿಯಲ್ಲಿ ಓರ್ವ ದೈವಾಂಶಸಂಭೂತಳಾದ ‘ಸಾದ್ವಿಮಣಿ’ ಎಂಬ ಸ್ತ್ರೀಯು ಶ್ರೀ ದೇವಿಯನ್ನು ಉಪಾಸನೆ ಹಾಗೂ ಬಿಂಬರೂಪದಲ್ಲಿ ಆರಾಧಿಸಿಕೊಂಡು ಬಂದಂತಹ ಪರಮಪುಣ್ಯ ಸ್ಥಳವೇ ‘ಕುದುಕೆರೆಬೆಟ್ಟು(Kudurekerebettu)’. ಈ ‘ಸಾದ್ವಿಮಣಿ’ಯು ದೇವಿಯ ಪರಮಭಕ್ತೆಯಾಗಿದ್ದು , ದೇವಿಯ ಅಂಶ ಸಂಭೂತಳಾಗಿದ್ದಳು.
ಹೀಗೆ ಕಾಲ ಉರುಳಿದಂತೆ ‘ಸಾದ್ವಿಮಣಿ’ ದೇವಿಯಲ್ಲಿ ಲೀನವಾಗುವ ಕಾಲವು ಸನ್ನಿಹಿತವಾಗುತ್ತಿದ್ದಂತೆ, ದೇವಿಯ ಮುಂದೆ ಏಕಚಿತ್ತದಿಂದ ಕುಳಿತು ಅಮ್ಮನವರನ್ನು ಧ್ಯಾನಿಸುತ್ತಾಳೆ. ಆಗ ಆದಿಪರಾಶಕ್ತಿ ಪಾರ್ವತಿಯು ಪ್ರಸನ್ನಳಾಗಿ “ಸಾದ್ವಿಮಣಿ ಚಿಂತಿಸಬೇಡ! ನಿನ್ನ ಭಕ್ತಿಗೆ ನಾನು ಮೆಚ್ಚಿದ್ದೇನೆ, ನೀನು ನನ್ನಲ್ಲಿ ಶಾಶ್ವತವಾಗಿ ಐಕ್ಯಳಾಗುವೆ. ಈ ಮೂಲಕ ನೀನು ನನ್ನನ್ನು ಪೂಜಿಸಿದ ಈ ಸ್ಥಳ ಮುಂದೊಂದು ದಿನ ಮಹಾನ್ ಕ್ಷೇತ್ರವಾಗಿ ಪ್ರಕಟವಾಗುತ್ತದೆ. ನೀನು ಪೂಜಿಸಿದ ನನ್ನ ಚೈತನ್ಯವು ಇಲ್ಲಿ ಶಾಶ್ವತವಾಗಿ ಸ್ಥಿತವಾಗಿ ಮುಂದೆ ನನ್ನ ಕ್ಷೇತ್ರ ನಿರ್ಮಾಣದ ಕಾಲದಲ್ಲಿ ಮುಂದೆ ನನ್ನ ಬಿಂಬದಲ್ಲಿ ಐಕ್ಯವಾಗುತ್ತದೆ. ಅಂತೆಯೇ ನೀನು ಮುಂದೆ ನನ್ನ ಪರಿವಾರಶಕ್ತಿಯಾಗಿ ನೆಲೆಸು. ಶೀಘ್ರ ಫಲಕ್ಕಾಗಿ  ಭಕ್ತರು ನಿನ್ನ ಮೂಲಕ ಬೇಡಿಕೆ ಸಲ್ಲಿಸಿದಾಗ, ಅದನ್ನು ನಾನು ಪೂರ್ಣವಾಗಿಸುತ್ತೇನೆ” ಎಂದು ದೇವಿ ಅದೃಶ್ಯಳಾಗುತ್ತಾಳೆ. ದೇವಿ ಅದೃಶ್ಯಳಾದ ಮರುಕ್ಷಣವೇ ‘ಸಾದ್ವಿಮಣಿ’ ಆತ್ಮವು ದೇವಿಯ ಮೂಲಚೈತನ್ಯದಲ್ಲಿ ಲೀನಳಾಗುತ್ತದೆ. ನಂತರ ‘ಸಾದ್ವಿಮಣಿ’ ಪೂಜಿತ ಬಿಂಬವು ಮಹಾಮಾಯೇಯ ಲೀಲೆಯಿಂದ ಕಾಲದಲ್ಲಿ ಲೀನವಾಗುತ್ತದೆ.
ಹೀಗೆ ಕಾಲಕಳೆದಂತೆ ಇದೊಂದು ಜನವಸತಿ ಇಲ್ಲದ ಸ್ಥಳವಾಗಿದ್ದು, ಮುಂದೆ ಇಲ್ಲಿ ಒಂದು ‘ರಾಮಕ್ಷತ್ರಿಯ’ ಕುಟುಂಬ ಬ್ರಾಹ್ಮಣರ ಮುಖೇನ ಬಂದು ನೆಲೆಸುತ್ತಾರೆ. ಹೀಗೆ ಇಲ್ಲಿ ಬಂದು ನೆಲೆಸಿದ ಕುಟುಂಬ ಸರಿಸುಮಾರು ಒಂದು ಶತಕಗಳ ಕಾಲ ಸುಖಮಯ ಜೀವನವನ್ನು ನಡೆಸುತ್ತಾರೆ. ಹೀಗೆ ಕಾಲಚಕ್ರವು ಉರುಳಿದಂತೆ ಈ ಕುಟುಂಬಕ್ಕೆ ಹಲವಾರು ಕೃತಿಮಾದಿ ದುಷ್ಟಬಾದೆಗಳು ಕಾಡುತ್ತವೆ. ಕುಟುಂಬ ಇದರಿಂದ ಬಹಳ ನೊಂದು ದೇವರಲ್ಲಿ ಮೊರೆಯಿಡುತ್ತಾರೆ. ಈ ವೇಳೆಯಲ್ಲಿ ತನ್ನನ್ನು ನಂಬಿದ ಕುಟುಂಬದ ರಕ್ಷಣೆಗಾಗಿ, ಈ ಕುಟುಂಬ ನಂಬಿ ಬಂದ ಪಾದೇಮಠದಲ್ಲಿ ನೆಲೆಸಿ ನಿಂದಿರುವ ದುರ್ಗತಿನಾಶಿನಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು(Durga) ಮಕ್ಕಳ ರಕ್ಷೆಗಾಗಿ ತನ್ನ ಪರಿವಾರದಲ್ಲಿ ಹಾಯ್ಗುಳಿ(haiguli) ಯಕ್ಷಿಣಿ(Yakshini), ಪಾಷಾಣಮೂರ್ತಿ(ಕಲ್ಕುಡ-Kalkuda), ಪಂಜುರ್ಲಿ(Panjurli)ಯನ್ನು ಕೂಡಿಕೊಂಡು ನೇರವಾಗಿ ಕುಟುಂಬದ ಗೃಹದೊಳಗೆ ಬಂದು ನೆಲೆಸುತ್ತಾಳೆ.
ಹೀಗೆ ದೇವಿಯು ಬಂದು ನೆಲೆಸಿದ ಕ್ಷಣದಿಂದ ಅದೇ ಗೃಹದಲ್ಲಿನ ಓರ್ವ ಬಾಲಕನಲ್ಲಿ ದೇವಿಯ ಆವೇಶ ಕಂಡುಬರಲು ಪ್ರಾರಂಭವಾಗುತ್ತದೆ. ಹೀಗೆ ಆ ಬಾಲಕನಲ್ಲಿ ದೇವಿಯು ಆವೇಶವಾಗಲು ಒಂದು ಕಾರಣವೂ ಇರುತ್ತದೆ. ಹಿಂದೆ ಇದೇ ಕುಟುಂಬಕ್ಕೆ ಸೇರಿದ ಒಂದು ಮಹಿಳೆಯಲ್ಲಿ ಪಾದೇಮಠದ ಶ್ರೀ ದುರ್ಗಾಪರಮೇಶ್ವರೀಯು ಆವೇಶಗೊಳ್ಳುತ್ತಿದ್ದು, ಈ ಮಹಿಳೆಯು ತನ್ನ ಜೀವಿತದ ಕೊನೆಯ ಕಾಲದಲ್ಲಿ ‘ಅಮ್ಮಾ ಇನ್ನುಮುಂದೆ ನಿನ್ನ ಆವೇಶವು ಮಹಿಳೆಯರಲ್ಲಿ ಕಾಣಿಸದೆ, ಯೋಗ್ಯ ಪುರುಷನಲ್ಲಿ ಕಾಣಿಸಲಿ’ ಎಂದು ಹೇಳಿ ಅರಿಕೆಮಾಡಿರುತ್ತಾಳೆ. ಈ ಕಾರಣದಿಂದಲೂ ಹಾಗೂ ತನ್ನು ಭಕ್ತರ ರಕ್ಷಣೆಯ ಉದ್ದೇಶದಿಂದಲೂ ಆದಿಮಾಯೆಯಾದ ಅಂಬಿಕೆ ಆವೇಶ ರೂಪದಲ್ಲಿ ಬಾಲಕನನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತಾಳೆ.
ಈ ರೀತಿಯಲ್ಲಿ ಬಾಲಕನನ್ನು ಆವರಿಸಿದ ದೇವಿಯು ತಾನು ನಿಮ್ಮ ರಕ್ಷಣೆಗಾಗಿ ನಿಮ್ಮಮೂಲದಿಂದ ಬಂದವಳೆಂದು, ತನಗೆ ಇನ್ನುಮುಂದೆ ಈ ಗೃಹದಲ್ಲಿ ‘ನವರಾತ್ರಿ’ ಪೂಜೆಯನ್ನು ನಡೆಸಬೇಕೆಂದು ತಿಳಿಸುತ್ತಾಳೆ. ದೇವಿಯ ಅಪ್ಪಣೆಯಂತೆ (2009ರಿಂದ) ಪ್ರತೀ ನವರಾತ್ರಿಯ ‘ದುರ್ಗಾಷ್ಠಮಿ(Durgastami)’ ಯ ದಿನ ದೇವಿಗೆ ವಿಜೃಂಭಣೆಯ ನವರಾತ್ರಿ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಹೀಗೆ ಮನೆಯೊಳಗೆ ನೆಲೆಯಾದ ದೇವಿ ಸಮೇತ ಪರಿವಾರವನ್ನು ಮರದ ಪೀಠದಲ್ಲಿ ತಾತ್ಕಾಲಿಕ ನೆಲೆಗೊಳಿಸಿ ಪೂಜಿಸಲಾಗುತ್ತದೆ. ಹೀಗೆ ದೇವಿಯು ತಾನೂ ಇಲ್ಲಿಯೆ ನೆಲೆಯಾಗುವುದಾಗಿಯೂ, ಮುಂದೆ ನನಗೆ ಇಲ್ಲಿ ಮಂದಿರ ನಿರ್ಮಿಸಿ ಪೂಜಿಸುವಂತೆಯು ಅಪ್ಪಣೆಯನ್ನು ನೀಡುತ್ತಾಳೆ. ಹೀಗೆ ಕುಟುಂಬ ದೇವಿಯ ಅಣತಿಯಂತೆ ನಡೆಯುತ್ತಾರೆ.
ಅಂದು ರಕ್ಷಕಿಯಾಗಿ ಬಂದ ಸಿರಿದೇವಿ ದುರ್ಗೆ, ಇಂದು ಅದೇ ಗೃಹದಲ್ಲಿಯೇ ನೆಲೆಬಯಸಿ ನಿಂದು ಪೂಜೆ-ಪುನಸ್ಕಾರಗಳನ್ನು ಸ್ವೀಕಾರ ಮಾಡುತ್ತಾ, ತನ್ನ ಭಕ್ತರ ಸಕಲ ಪೀಡೆಯನ್ನು ಕಳೆದು ಸುಖಮಯ ಜೀವನವನ್ನು ಕರುಣಿಸುತ್ತಾಳೆ. ಅದೇ ತೆರನಾಗಿ ಪಾದೇಮಠದಿಂದ ಬಂದ ದುರ್ಗೆ ಅನಾದಿಯಲ್ಲಿ ತನ್ನ ಭಕ್ತೆ ‘ಸಾದ್ವಿಮಣಿ’ಗೆ ನೀಡಿದ ಅಭಯದಂತೆ ತನ್ನ ಮೂಲಚೈತನ್ಯದಲ್ಲಿ ಲೀನಳಾಗುತ್ತಾಳೆ. ಹೀಗೆ ಪಾದೇಮಠದಿಂದ ಬಂದ ಶ್ರೀ ದುರ್ಗಾಪರಮೇಶ್ವರೀ(Duragaparameshwari) ಅಮ್ಮನವರು ‘ಸಾದ್ವಿಮಣಿ’ ಪೂಜಿಸಲ್ಪಟ್ಟ ತನ್ನ ಮೂಲಚೈತನ್ಯದಲ್ಲಿ ಲೀನಳಾಗುತ್ತಾಳೆ. ಮೂಲಚೈತನ್ಯದಲ್ಲಿ ಲೀನಳಾದ ದೇವಿ ಶಾಂತಸ್ವರೂಪಿಯಾಗಿ ತನ್ನ ಮಾಯಾರೂಪದಿಂದ ಸಾಕ್ಷಾತ್ ರಾಜರಾಜೇಶ್ವರೀ(Rajarajeshwari) ಸ್ವರೂಪದಲ್ಲಿ ಪ್ರಕಟವಾಗುತ್ತಾಳೆ. ತನ್ನ ರೌದ್ರ ಸ್ವರೂಪವನ್ನು ತ್ಯಜಿಸಿ ಸ್ವರ್ಣಮೈಕಾಂತಿಯನ್ನು ಹೊಂದಿ ರಾಜರಾಜೇಶ್ವರೀ ರೂಪದಲ್ಲಿ ಪ್ರಕಟವಾದ ದೇವಿಯ ರೂಪವು ಈ ರೀತಿಯಲ್ಲಿ ವರ್ಣಿಸಲ್ಪಟ್ಟಿದೆ.

|| ತ್ರಿನಯನಾಂ ಹಿರಣ್ಯಸುಂದರಿಂ ಗೌರಿ ಪದ್ಮಾಸನಸ್ಥಿತಾಂ |
ಬಾಲಚಂದ್ರಾಕೃತಿ ಸಿಂಧೂರಾಂ ಲಲಿತಾ ಶಂಕಚಕ್ರಮಭಯಶೂಲಾಂಭುಜಾಂ |
ಪಂಚಣಿವಿಭೂಷಿತಾ ಹೇಮಮುಕುಟಾಂ ಚಂಡಿಕಾ ವರಸಿಂಹವ್ಯಾಘ್ರವಾಹನಾಂ |
ವಂದೇ ಪರಾಶಕ್ತಿಃ ನಮಾಮಿ ಸ್ವರ್ಣದುರ್ಗಾಪರಮೇಶ್ವರೀಂ ಧ್ಯಾಯೇತ್ ||

ಈ ಮೇಲಿನ ಶ್ಲೋಕದ ವರ್ಣನೆಯಂತೆ “ದೇವಿಯು ಮೂರು ಕಣ್ಣುಳ್ಳವಳೂ, ಸ್ವರ್ಣವರ್ಣದ ಮೈಕಾಂತಿಯನ್ನು ಹೊಂದಿದವಳಾಗಿಯೂ, ಪದ್ಮಾಸನ ಸ್ಥಿತಳಾಗಿಯೂ, ಹಣೆಯಲ್ಲಿ ಬಾಲಚಂದ್ರಾಕೃತಿಯ ಸಿಂಧೂರವನ್ನು- ತ್ರಿಪುಂಡ್ರವನ್ನು ಧರಿಸಿ, ಪಂಚಪಣಿಗಳಿಂದ ಭೂಷಿತವಾದ ಸ್ವರ್ಣಕೀರಿಟವನ್ನು ಧರಿಸಿದ ಪರಾಶಕ್ತಿಯಾದ ಸ್ವರ್ಣದುರ್ಗೆಯೆ ನಿನ್ನನ್ನು ನಾನು ಧ್ಯಾನಿಸುತ್ತೇನೆ”  ಎಂದು ವರ್ಣಿತವಾಗಿದೆ.
ಈ ಕಾರಣದಿಂದಾಗಿ ಪಾದೇಮಠದ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರು ಕುದುರೆಕೆರೆಬೆಟ್ಟಿನಲ್ಲಿ ‘ಶ್ರೀ ಆದಿಪರಾಶಕ್ತಿ(Aadhiparashakthi) ಸ್ವರ್ಣದುರ್ಗಾಪರಮೇಶ್ವರೀ’ ಎಂಬ ದಿವ್ಯ ನಾಮದಿಂದ ನೆಲೆಯಾಗುತ್ತಾಳೆ. ಅಂತೆಯೇ ತಾನೂ ಸೌಮ್ಯರೂಪವನ್ನು ಧರಿಸುವ ವೇಳೆಯಲ್ಲಿ ತನ್ನ ಉಗ್ರರೂಪವನ್ನು ಕ್ರೋಢಿಕರಿಸಿ ತನ್ನದೇ ಇನ್ನೊಂದು
ಬಿಂಬರೂಪವಾಗಿ ಪ್ರಕಟಪಡಿಸುತ್ತಾಳೆ. ದೇವಿಯ ಉಗ್ರರೂಪವೇ ಸಾಕ್ಷಾತ್ “ಶ್ರೀ ಭದ್ರಕಾಳಿ” ಅಮ್ಮನವರು. ಶ್ರೀ ದೇವಿಯ ಎರಡನೇಯ ರೂಪವಾದ ‘ಭದ್ರಕಾಳಿ’(Badrakali) ದೇವಿಯು ಮಂದಿರದ ಮುಂಭಾಗದ ‘ಸರ್ವತೋಭದ್ರ ವೃಕ್ಷ(ಕಹಿಬೇವು)’ದಲ್ಲಿ ನೆಲೆಯಾಗುತ್ತಾಳೆ. ಅಂದಿನಿಂದ ‘ಭದ್ರಕಾಳಿ’ ಸ್ವರೂಪಿಣಿಗೆ ‘ಕೂಷ್ಮಾಂಡ(ಕುಂಬಳಕಾಯಿ-Kushmaanda)’ ಬಲಿಯನ್ನು ನೀಡಲಾಗುತ್ತಿದೆ.
ಈ ರೀತಿಯಲ್ಲಿ ಹರನರಸಿ ಪಾರ್ವತಿಯು ‘ಸಾದ್ವಿಮಣಿ’ ಯಿಂದ ಪೂಜಿಸಲ್ಪಟ್ಟು, ತನ್ನನ್ನು ನಂಬಿದ ಕುಟುಂಬದ ರಕ್ಷಕಿಯಾಗಿಯೂ ಮಹಾಮಾತೆ ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮಶ್ವರೀಯಾಗಿ ತನ್ನ ಪರಿವಾರದಲ್ಲಿ ನಾಗ, ಯಕ್ಷಿಣಿ, ಹಾಯ್ಗುಳಿ(ಕುಟುಂಬದ ಮೂಲ ದೈವ) ಕಲ್ಕುಡ(ಪಾಷಾಣಮೂರ್ತಿ), ಪಂಜುರ್ಲಿ ಹಾಗೂ ರಾಹು-ನೀಚ ಸಪರಿವಾರಳಾಗಿ ಕುದುರೆಕೆರೆಬೆಟ್ಟಿನಲ್ಲಿ ಶಾಶ್ವತವಾಗಿ ನೆಲೆಯಾಗುತ್ತಾಳೆ. 


ವಿಳಾಸ : -
ಶ್ರೀ ಆದಿಪರಾಶಕ್ತಿ ಸ್ವರ್ಣದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ,
ಕುದುರೆಕೆರೆಬೆಟ್ಟು, ಕೋಟೇಶ್ವರ-576222, ಕುಂದಾಪುರ ತಾ||
ಉಡುಪಿ ಜಿ|| ಕರ್ನಾಟಕ.

ದಾರಿಯ ವಿವರ : ಕುಂದಾಪುರ –ಕೋಟೇಶ್ವರದಿಂದ ದೇವಾಲಯಕ್ಕೆ ಹೋಗಲು ಸುಲಭ ಮಾರ್ಗಸೂಚಿಯಿದೆ. ಕೋಟೇಶ್ವರ-ಕುಂದಾಪುರ ಮದ್ಯದಲ್ಲಿ ಮೆಜೆಸ್ಟಿಕ್ ಹಾಲ್ ಎದುರುಗಡೆಯ ಕುದುರೆಕೆರೆಬೆಟ್ಟು ರಸ್ತೆಯಲ್ಲಿ 1ಕಿ.ಮೀ ಸಾಗಿದರೇ ಶ್ರೀ ದೇವಿಯ ಸಾನ್ನಿಧ್ಯವನ್ನು ತಲುಪಬಹುದು.

For more details log on to : www.swarnadurgatemple.blogspot.in